ಟರಾಂಟೋ 1

ಕೆನಡದ ಆಂಟಾರಿಯೋ ಪ್ರಾಂತ್ಯದ ರಾಜಧಾನಿ, ಆಂಟಾರಿಯೋ ಜಿಲ್ಲೆಯ ಆಡಳಿತ ಕೇಂದ್ರ. ಕೆನಡದ ಮಹಾನಗರಗಳಲ್ಲಿ ಎರಡನೆಯದು. ಆಂಟಾರಿಯೋ ಸರೋವರದ ವಾಯವ್ಯ ಅಂಚಿನ ಮೈದಾನದಲ್ಲಿದೆ. ಸು. 2 ಚ. ಮೈ. ಇರುವ ಟರಾಂಟೋ ಕೊಲ್ಲಿಯೂ ನಗರದ ದಕ್ಷಿಣದಲ್ಲಿರುವ ದ್ವೀಪಗಳೂ ಸೇರಿ ಟರಾಂಟೋದ ವಿಸ್ತೀರ್ಣ 40 ಚ.ಮೈ. ಜನಸಂಖ್ಯೆ 6.90.634 (1971): ಸುತ್ತಣ ಜನವಸತಿಗಳೂ ಸೇರಿದ ಮಹಾನಗರಪ್ರದೇಶದ ಜನಸಂಖ್ಯೆ 26.09.638.
ಟರಾಂಟೋ ಎಂಬುದು ಹ್ಯೂರಾನ್ ಇಂಡಿಯನರು ತಮ್ಮ ನಾಡಿಗೆ ಇಟ್ಟ ಹೆಸರು: ಸಮೃದ್ಧವಾದ ನಾಡು ಎಂಬುದು ಅದರ ಅರ್ಥ. ಈಗಿನ ನಗರದ ನಿವೇಶನದಲ್ಲಿ ಫ್ರೆಂಚರು 1750-51ರಲ್ಲಿ ರೌಲೀ ಕೋಟೆ ಕಟ್ಟಿದರು. ಆದರೆ 9 ವರ್ಷಗಳ ತರುವಾಯ ಇಂಗ್ಲಿಷರು ಮಿಸಿಸಾಗ ಇಂಡಿಯನರಿಂದ ಅದನ್ನು ಕೊಂಡು. ತಾವು ಹೊಸದಾಗಿ ರಚಿಸಿದ ಅಪ್ಪರ್ ಕೆನಡ ಪ್ರಾಂತ್ಯದ ರಾಜಧಾನಿಯಾಗಿ ಮಾಡಿದಾಗ ಹೆಚ್ಚುಹೆಚ್ಚಾಗಿ ಜನ ಅಲ್ಲಿ ನೆಲಸತೊಡಗಿದರು. ಅಮೆರಿಕ ಸಂಯುಕ್ತ ಸಂಸ್ಥಾನಗಳಿಂದ ದೂರದಲ್ಲಿ ಆಂಟಾರಿಯೋ ಸರೋವರದ ಮೇಲೆ ನಿಸರ್ಗದಿಂದ ರಕ್ಷಿತವಾದ ರೇವಿನಿಂದ ಕೂಡಿದ  ಈ ನಗರದ ಸನ್ನಿವೇಶ ಮಹತ್ತ್ವಪೂರ್ಣವಾದ್ದೆನಿಸಿತು. 

	1797ರಲ್ಲಿ ಯಾರ್ಕ್ ಎಂಬ ಹೆಸರು ತಳೆದ ಈ ಹೊಸ ರಾಜಧಾನಿಯಲ್ಲಿ ಪ್ರಾಂತ್ಯದ ವಿಧಾನಮಂಡಲದ ಅಧಿವೇಶನ ಸೇರಿತು. 1812 ಯುದ್ಧದಲ್ಲಿ ಇದು ಅಮೆರಿಕನ್ ಸೈನ್ಯದ ವಶವಾಯಿತು. ಅಲ್ಲಿಯ ಸಂಸತ್ ಭವನವೂ ಪತ್ರಾಗಾರವೂ ಭಸ್ಮಹೊಂದಿದುವು (1813). 1830ರ ದಶಕದಲ್ಲಿ ನಗರಕ್ಕೆ ಜನರು ಹೆಚ್ಚಾಗಿ ವಲಸೆ ಬಂದ ಫಲವಾಗಿ ಜನಸಂಖ್ಯೆ ಬೆಳೆಯತೊಡಗಿತು. 1834ರಲ್ಲಿ ನಗರವನ್ನು ಪುನಃ ಟರಾಂಟೋ ಎಂಬ ಹೆಸರಿನಿಂದಲೇ ಕರೆಯಲಾಯಿತು. 19ನೆಯ ಶತಮಾನದ ಉತ್ತರಾರ್ಧದಲ್ಲಿ ಈ ನಗರ ಕೆನಡದ ಪ್ರಮುಖ ಹಣಕಾಸಿನ, ವ್ಯಾಪಾರದ ಹಾಗೂ ಕೈಗಾರಿಕೆಯ ಕೇಂದ್ರವೂ ರೈಲ್ವೆ ಕೇಂದ್ರವೂ ಆಯಿತು. 1885ರ ಹೊತ್ತಿಗೆ ನಗರದಲ್ಲಿ 1.20.000 ಜನರಿದ್ದರು. 

	1953ರಲ್ಲಿ ಟರಾಂಟೋ ಪುರಸಭೆಯ ಮತ್ತು ಅದರ 12 ಉಪನಗರಗಳ ಪೌರ ಸಭೆಗಳ ಒಕ್ಕೂಟವನ್ನು ಏರ್ಪಡಿಸಿ ಮೆಟ್ರೋಪಾಲಿಟನ್ ಟರಾಂಟೋ ಅಥವಾ ಮೆಟ್ರೋ ಎಂಬ ಹೊಸ ಪುರಸಭೆಯನ್ನು. ರಚಿಸಲಾಯಿತು. ನಗರ ಪುನವ್ರ್ಯವಸ್ಥೆಯನ್ನು ಕುರಿತು ಸಲಹೆ ನೀಡಲು 1963ರಲ್ಲಿ ಆಯೋಗವೊಂದನ್ನು ನೇಮಿಸಲಾಯಿತು. ಟರಾಂಟೋ ಮತ್ತು ಇತರ 13 ಪೌರಸಭೆಗಳನ್ನು ಒಂದುಗೂಡಿಸಿ ಟರಾಂಟೋ, ನಾರ್ತ್‍ಯಾರ್ಕ್, ಎಟೋಬಿಕೋಕ್ ಮತ್ತು ಸ್ಕಾರ್‍ಬರೊ ಎಂಬ ನಾಲ್ಕು ನಗರಗಳಾಗಿ ಪುನರ್ ವಿಂಗಡಿಸಬೇಕೆಂದು ಆ ಆಯೋಗ ಶಿಫಾರಸು ಮಾಡಿತು. 

	ನಗರದಲ್ಲಿ ಟರಾಂಟೋ (1827). ವಿಕ್ಟೋರಿಯ (1836) ಹಾಗೂ ಯಾರ್ಕ್ (1959) ವಿಶ್ವವಿದ್ಯಾಲಯಗಳೂ ಅನೇಕ ಕಾಲೇಜುಗಳೂ ಇವೆ. ಯಂಗ್ ಮತ್ತು ಕ್ವೀನ್ ರಸ್ತೆಗಳು ಪ್ರಮುಖ ವ್ಯಾಪಾರಸ್ಥಳಗಳು. ಹೊಸ ಪುರಭವನ 1965ರಲ್ಲಿ ನಿರ್ಮಾಣವಾಯಿತು. ಟರಾಂಟೋ ವಿಶ್ವವಿದ್ಯಾಲಯದ ಅಂಚಿನಲ್ಲಿ ಕ್ವೀನ್ಸ್ ಪಾರ್ಕ್ ಇದೆ. ನಗರದ ವಸ್ತುಪ್ರದರ್ಶನಾಲಯದಲ್ಲಿ ಪ್ರತಿವರ್ಷ ಕೆನಡದ ರಾಷ್ಟ್ರೀಯ ವಸ್ತುಪ್ರದರ್ಶನ ನಡೆಯುತ್ತದೆ. 
	ಟರಾಂಟೋ ಒಂದು ಮುಖ್ಯ ಸಾರಿಗೆ ಕೇಂದ್ರ. ಸರೋವರ ರೇವಿನಿಂದ ಧಾನ್ಯ. ಜಾನುವಾರು. ಮಾಂಸ ಇತ್ಯಾದಿ ಸಾಗುತ್ತವೆ. ನಗರದ ಮುಖ್ಯ ಉದ್ಯಮಗಳು ವಿದ್ಯುತ್ ಉಪಕರಣ, ಕಬ್ಬಿಣ ಮತ್ತು ಉಕ್ಕಿನ ಸರಕು, ವ್ಯವಸಾಯ ಯಂತ್ರ ಮತ್ತು ವಿಮಾನ ತಯಾರಿಕೆ. ಮುದ್ರಣ ಕೆಲಸ ಹಾಗೂ ಗ್ರಂಥ ಪ್ರಕಟಣೆ.
(ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ